ಬಸವಕಲ್ಯಾಣ
 	ಭಾರತದ ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಬಿದರ್ ಜಿಲ್ಲೆಯ ಒಂದು ತಾಲ್ಲೂಕು ಹಾಗೂ ತಾಲ್ಲೂಕು ಆಡಳಿತ ಕೇಂದ್ರ ಪಟ್ಟಣ. ಪೂರ್ವದಲ್ಲಿ ಹುಮನಾಬಾದ್, ಆಗ್ನೇಯದಲ್ಲಿ ಗುಲ್ಬರ್ಗ, ದಕ್ಷಿಣದಲ್ಲಿ ಆಳಂದ. ಈಶಾನ್ಯದಲ್ಲಿ ಭಾಲ್ಕಿ-ಈ ತಾಲ್ಲೂಕುಗಳೂ ಪಶ್ಚಿಮದಲ್ಲಿ ಮಹಾರಾಷ್ಟ್ರ ರಾಜ್ಯ ಸುತ್ತುವರಿದಿವೆ. ಈ ತಾಲ್ಲೂಕಿನಲ್ಲಿ 114 ಗ್ರಾಮಗಳಿವೆ. ವಿಸ್ತೀರ್ಣ 1,202ಚ ಕಿಮೀ ಜನಸಂಖ್ಯೆ 2,99,521 (2001). 

	ಬಸವಕಲ್ಯಾಣ ತಾಲ್ಲೂಕು 1965ರ ನವಂಬರಿನಲ್ಲಿ ರೂಪಿತವಾಯಿತು. ಹಿಂದಿನ ಭಾಲ್ಕಿ ತಾಲ್ಲೂಕಿನಿಂದ 25 ಗ್ರಾಮಗಳನ್ನೂ ಹುಮನಾಬಾದಿನಿಂದ 89 ಗ್ರಾಮಗಳನ್ನೂ ಬಸವಕಲ್ಯಾಣ ಪಟ್ಟಣವನ್ನೂ ಸೇರಿಸಿ ಇದನ್ನು ರಚಿಸಲಾಯಿತು.

	ತಾಲ್ಲೂಕು ದಖನ್ ಪ್ರಸ್ತಭೂಮಿಯ ಭಾಗ. ಇದು ಸಮುದ್ರ ಮಟ್ಟದಿಂದ ಸಾಮಾನ್ಯವಾಗಿ ಸುಮಾರು 610 ಕಿಮೀ ಎತ್ತರದಲ್ಲಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 891.76 ಮಿಮೀ. ತಾಲ್ಲೂಕಿನ ನೈಋತ್ಯದ ಗಡಿಯಲ್ಲಿ ಬೆಣ್ಣೆತೊರೆ ನದಿ ಸ್ವಲ್ಪ ದೂರ ಹರಿಯುತ್ತದೆ. ತಾಲ್ಲೂಕಿನ ನದಿಗಳು ಗಂಡೋರಿ, ಮುಲ್ಲಾಮಾರಿ ಮತ್ತು ಚುಳಕಿ. ಗಂಡೋರಿ ನದಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೂ ಮುಲಾಮಾರಿ ಪಶ್ಚಿಮದಿಂದ ಆಗ್ನೇಯದ ಕಡೆಗೂ ಹರಿಯುತ್ತದೆ. ತಾಲ್ಲೂಕಿನ ಉತ್ತರದಲ್ಲಿ ಈಶಾನ್ಯದ ಕಡೆಗೆ ಚುಳಕಿ ಹರಿಯುತ್ತದೆ. ಅದು ಭಾಲ್ಕಿ ತಾಲ್ಲೂಕಿನಲ್ಲಿ ಕಾರಂಜಾ ನದಿಯನ್ನು ಸೇರುತ್ತದೆ.

	ತಾಲ್ಲೂಕಿನದು ಕೆಂಪು ಮಿಶ್ರವಾದ ಕಪ್ಪು ಮಣ್ಣಿನ ನೆಲ. ನೀರಾವರಿಯ ಮೂಲಗಳು ಬಾವಿ ಕೆರೆಗಳು. ಮುಲ್ಲಾಮಾರಿ ನಾಲೆ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ. ತಾಲ್ಲೂಕಿನ ಅರಣ್ಯ ಪ್ರದೇಶ 1,327 ಹೆಕ್ಟೇರ್. ಉಳಿದ ನೆಲದಲ್ಲಿ ಬೆಳೆಯುವ ಫಸಲುಗಳು ಜೋಳ, ಸಜ್ಜೆ, ಸೇಂಗಾ, ಬತ್ತ, ಕಬ್ಬು, ತೊಗರಿ, ಹತ್ತಿ ಮತ್ತು ಎಣ್ಣೆ ಬೀಜ.

	ತಾಲ್ಲೂಕಿನಲ್ಲಿ ಸುಮಾರು 1,800 ಕೈಮಗ್ಗಗಳಿವೆ. ಖಂಡಸಾರಿ ಸಕ್ಕರೆ ಕಾರ್ಖಾನೆಯೂ ಇತರ ಕೆಲವು ಸಣ್ಣ ಕೈಗಾರಿಕೆಗಳೂ ಇವೆ. ಕೈಮಗ್ಗದ ಬಟ್ಟೆಗಳಿಗೆ ತಾಲ್ಲೂಕು ಪ್ರಸಿದ್ಧವಾಗಿದೆ. ಹೈದರಾಬಾದ್-ಹುಮನಾಬಾದ್-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಸಾಗುತ್ತದೆ. ಉತ್ತರದಲ್ಲಿ ಪ್ರಮುಖವಾದ್ದು ಭಾಲ್ಕಿ-ನಿಲಂಗಾ ರಸ್ತೆ.

	ತಾಲ್ಲೂಕಿನಲ್ಲಿ ಪ್ರಮುಖ ಯಾತ್ರಾಸ್ಥಳ ಬಸವಕಲ್ಯಾಣ. ಇದರ ಬಳಿಯ ಚಂದಕಾಪುರದಲ್ಲಿ ಶಿವ ದೇವಾಲಯವೂ ಅಮೃತಕುಂಡವೆಂಬ ಕೊಲವೂ ಇದೆ. ಕಿನ್ನಿ ಗ್ರಾಮದಲ್ಲಿ ಪ್ರತಿವರ್ಷವೂ ಶರಣ ಬಸವೇಶ್ವರನ ಜಾತ್ರೆ ನಡೆಯುತ್ತದೆ. ಕೋಹಿನೂರ್ ಗ್ರಾಮದಲ್ಲಿ ಜಿಂದಷಾ ಮದಾರ್‍ಷಾ ದರಗಾ ಇದೆ. ಹಲಸೂರಿನಲ್ಲಿ ವೀರಭದ್ರೇಶ್ವರನ ಜಾತ್ರೆಯೂ ಗೋರ್ತಾ (ಬಿ) ಯಲ್ಲಿ ಲಕ್ಷ್ಮಿದೇವಿಯ ಜಾತ್ರೆಯೂ ನಡೆಯುತ್ತದೆ.

	ಬಸವಕಲ್ಯಾಣ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ. ಬಿದರೆಯ ಪಶ್ಚಿಮಕ್ಕೆ 80 ಕಿಮೀ ದೂರದಲ್ಲೂ ಗುಲ್ಬರ್ಗಕ್ಕೆ 99 ಕಿಮೀ. ಭಾಲ್ಕಿಗೆ 55 ಕಿಮೀ ಮತ್ತು ಬೆಂಗಳೂರಿಗೆ 83 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 58,742 (2001).

	ಇದು ಕಲ್ಯಾಣಿ ಚಾಳುಕ್ಯರ ರಾಜಧಾನಿಯಾಗಿತ್ತು. ಮಾನ್ಯಖೇಟದ ರಾಷ್ಟ್ರಕೂಟರನ್ನು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ತೈಲಪ ಪರಾಜಯಗೊಳಿಸಿ 973ರಲ್ಲಿ ಚಾಳುಕ್ಯರ ಸ್ವತಂತ್ರ ರಾಜ್ಯ ಸ್ಥಾಪನೆ ಮಾಡಿದಾಗ ಸ್ವಲ್ಪಕಾಲ ಆತನ ರಾಜಧಾನಿ ಮಾನ್ಯಖೇಟ (ಗುಲ್ಬರ್ಗ ಜಿಲ್ಲೆಯ ಮಳಖೇಡ) ಆಗಿತ್ತು. ತೈಲಪನ ಮೊಮ್ಮಗ ಇಮ್ಮಡಿ ಜಯಸಿಂಹ ಜಗದೇಕಮಲ್ಲನ ಆಳ್ವಿಕೆಯಲ್ಲಿ (1024-1042) ಸುಭದ್ರವಾದ ರಾಜಧಾನಿಯ ಸ್ಥಳಕ್ಕಾಗಿ ಶೋಧ ನಡೆದು ಅದಕ್ಕೆ ಕಲ್ಯಾಣ ತಕ್ಕಸ್ಥಳವೆಂದು ನಿರ್ಧರಿಸಲಾಯಿತು. ಜಯಸಿಂಹ ಮಗ ಚಾಳುಕ್ಯ 1ನೆಯ ಸೋಮೇಶ್ವರ (1042-1068). ಈತ 11ನೆಯ ಶತಮಾನದಲ್ಲಿ ಕಲ್ಯಾನಪುರವನ್ನು ನಿರ್ಮಿಸಿ ತನ್ನ ರಾಜಧಾನಿಯಾಗಿ ಮಾಡಿಕೊಂಡ. ಈ ರಾಜರಿಗೆ ಕಲ್ಯಾಣ ಚಾಳುಕ್ಯ ವಂಶವೆಂದು ಹೆಸರಾದ್ದು ಇದರಿಂದಲೇ. ಇಲ್ಲಿ ಅತ್ತಿಮಬ್ಬೆ ಒಂದು ಜಿನಾಲಯವನ್ನು ನಿರ್ಮಿಸಿದ್ದಂತೆ ತಿಳಿದುಬರುವುದರಿಂದ ಸೋಮೇಶ್ವರನ ಕಾಲಕ್ಕಿಂತ ಹಿಂದೆಯೇ ಇಲ್ಲಿ ಒಂದು ಸಣ್ಣ ಊರು ಇದ್ದುದು ಅಸಂಭವವಲ್ಲ. ಇದು ಕುಂತಲ ರಾಜ್ಯದ ರಾಜಧಾನಿಯಾದ ಮೇಲೆ 120 ವರ್ಷಗಳ ಕಾಲ ಬೆಳೆದು ದೊಡ್ಡ ನಗರವಾಗಿ ಅನೇಕ ಪುರಗಳನ್ನೊಳಗೊಂಡಿತು. ಇದು 12 ಗಾವುದ ಉದ್ದವಾಗಿತ್ತು. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಉಳ್ಳದ್ದಾಗಿತ್ತು. ಈಗಿನನಾರಾಯಣಪುರ, ಶಿವಪುರ, ಪ್ರತಾಪಪುರ, ತ್ರಿಪುರಾಂತಕನ ಹಕ್ಕಲು, ಉಮಾಪುರ-ಎಲ್ಲವೂ ಕಲ್ಯಾಣ ಪಟ್ಟಣದ ಹರವುಳಾಗಿದ್ದವೂ. 6ನೆಯ ವಿಕ್ರಮಾದಿತ್ಯನ (1076-1127) ಕಾಲದಲ್ಲಿ ಇದು ವೈಭವದ ಶಿಖರವನ್ನೇರಿತು. ಆಗ ಇದು ಅಖಿಲ ಭಾರತ ಖ್ಯಾತಿಗಳಿಸಿದ  ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಕಲ್ಯಾಣ ಪುರದಂಥ ಪಟ್ಟಣ ಈ ಭೂಮಿಯ ಮೇಲೆ ಹಿಂದೆ ಇರಲಿಲ್ಲ. ಈಗ ಇಲ್ಲ, ಮುಂದೆ ಇರುವುದಿಲ್ಲ ಎಂದು ವಿಜ್ಞಾನೇಶ್ವರನೂ ಇದು ಬ್ರಹ್ಮಲೋಕ ದೇವಲೋಕಗಳಿಗೆ ಸಾಟಿ ಎಂದು ಬಿಲ್ಹಣನೂ ಹೊಗಳಿದ್ದಾರೆ.

	ಚಾಳುಕ್ಯ ರಾಜ್ಯವನ್ನು ಕಳಚುರಿ 2ನೆಯ ಬಿಜ್ಜಳ ಅಪಹರಿಸಿದಾಗಿನಿಂದ (1162) ಕಲ್ಯಾಣದ ಗೌರವ ಇಳಿಮುಖವಾಯಿತು. ಅನಂತರ ಸೇವುಣ ಭಿಲ್ಲಮ ನಡೆಸಿದ ಆಕ್ರಮಣದಿಂದ ಇದರ ಕೀರ್ತಿ ಅಸ್ತಂಗತವಾಯಿತು.

	12ನೆಯ ಶತಮಾನದ ರಾಜಕೀಯ ಮತ್ತು ಧಾರ್ಮಿಕ ಕ್ರಾಂತಿಗಳಿಂದಾಗಿ ಕಲ್ಯಾಣಕ್ಕೆ ವಿಶಿಷ್ಟ ಸ್ಥಾನ ಪ್ರಾಪ್ತವಾಯಿತು. ಬಸವೇಶ್ವರರ ನೇತ್ರತ್ವದಲ್ಲಿ ನಡೆದ ವೀರಶೈವ ಧರ್ಮಪ್ರಸಾರ ಕಾರ್ಯಕ್ಕೆ ಕಲ್ಯಾಣವೇ ಕೇಂದ್ರವಾಗಿತ್ತು. ಆ ಕಾರ್ಯ ಆರಂಭವಾದ್ದು ಇಲ್ಲೇ. ದೇಶ ದೇಶಾಂತರಗಳಿಂದ ಜಂಗಮರೂ ಭಕ್ತರೂ ಪ್ರವಾಹದಂತೆ ಇಲ್ಲಿಗೆ ಬಂದರು. ಇದು ಒಂದು ಯಾತ್ರಸ್ಥಳವೇ ಆಯಿತು. ವೀರಶೈವ ಧರ್ಮ ಸಭೆ, ಸಮ್ಮೇಳನ, ವಿಚಾರಗೋಷ್ಠಿ, ಆಧ್ಯಾತ್ಮ ಸಾಧನೆಗಳಿಗೆ ಕಲ್ಯಾಣವೇ ಕೇಂದ್ರಭೂಮಿ ಎನಿಸಿತು. ಇಲ್ಲಿ ಸ್ಥಾಪಿತವಾದ ಅನುಭವ ಮಂಟಪದಲ್ಲಿ ಬಸವೇಶ್ವರ, ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ಧರಾಮ, ಮಹದೇವಿಯಕ್ಕ, ಮಡಿವಾಳ ಮಾಚಯ್ಯ ಮುಂತಾದ ಅನೇಕ ಶರಣ-ಶರಣಿಯರಿಂದ ವೀರಶೈವ ಮತದ ಮಹತ್ತರ ಧಾರ್ಮಿಕ ಚರ್ಚೆಗಳು ನಡೆದುವು. ಸಂಗನ ಬಸವ ಕಲ್ಯಾಣಕ್ಕೆ ಬಂದು ಮಹಮನೆಯ ಕಟ್ಟಿದರೆ ಮತ್ರ್ಯಲೋಕವೆಲ್ಲವೂ ಭಕ್ತಿಸಾಮ್ರಾಜ್ಯವಾಗಿತ್ತು. ಕಲ್ಯಾಣ ಕೈಲಾಸವೆನಿಸಿತ್ತು-ಎಂಬ ವಚನದಿಂದ ಕಲ್ಯಾಣದ ಅಂದಿನ ಧಾರ್ಮಿಕ ಹಿರಿಮೆ ಎಷ್ಟೆಂಬುದು ಗೊತ್ತಾಗುತ್ತದೆ. ಅಕ್ಕಮಹಾದೇವಿಗೆ ಬಸವಣ್ಣನಿದ್ದ ಕಲ್ಯಾಣ ಅವಿಮುಕ್ತ ಕ್ಷೇತ್ರವಾಗಿ ಕಂಡಿತು.

	ಈ ಧಾರ್ಮಿಕ ಕ್ರಾಂತಿಯಿಂದ ರಾಜಕೀಯದಲ್ಲಿ ಗೊಂದಲವುಂಟಾಗಿ ಬಿಜ್ಜಳನ ಕೊಲೆಯಾದಾಗ ಊರು ಕೆಟ್ಟು ಸೂರೆಯಾಗಿ ಕಲ್ಯಾಣ ಹಾಳು ಬಿತ್ತು. ಕೆಟ್ಟತ್ತು ಕಲ್ಯಾಣ ಹಾಳಾಯ್ತು. ನೋಡಾ ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು, ಸಂದಿತ್ತು ಕೂಡಲ ಸಂಗಮದೇವಾ ನಿಮ್ಮ ಕವಳಿಗೆಗೆ-ಎಂಬ ಬಸವೇಶ್ವರ ವಚನದಿಂದ ಮೊದಲನೆಯ ಕ್ರಾಂತಿಕಾಲದಲ್ಲಿಯೇ ರಾಜಕೀಯವಾಗಿ ಕಲ್ಯಾಣ ಕೆಟ್ಟಿತ್ತೆಂಬುದು ವ್ಯಕ್ತವಾಗುತ್ತದೆ. ಬಿಜ್ಜಳನ ಅನಂತರ ಬಂದ ಅವನ ವಂಶದವರು ಕಲ್ಯಾಣದಲ್ಲಿ ಹೆಚ್ಚು ಕಾಲ ನಿಲ್ಲಲಾರದೆ ಹೋದರು. ಕಳಚುರಿಗಳಿಂದ ತನ್ನ ರಾಜ್ಯವನ್ನು ಹಿಂದಕ್ಕೆ ಪಡೆದರೂ ಚಾಲುಕ್ಯ ನಾಲ್ಮಡಿ ಸೋಮೇಶ್ವರ ಆಳಲು ಅಸಮರ್ಥನಾಗಿ ಕಲ್ಯಾಣಯಾದವರ ವಶವಾಯಿತು.

	ಮುಂದೆ ಈ ನಗರ ತನ್ನ ಪ್ರತಿಷ್ಠೆಯನ್ನು ಕಳೆದುಕೊಂಡು ರಾಜಕೀಯವಾಗಿ ಕೈ ಬದಲಾಯಿಸುತ್ತ ಹೋಯಿತು. ದೇವಗಿರಿಯ ಪತನಾನಂತರ ಮಹಮ್ಮದ್ ಬಿನ್ ತುಗಲಕನ ಆಳ್ವಿಕೆಗೆ ಒಳಪಟ್ಟು ಮುಂದೆ ಬಹಮನಿ ಸುಲ್ತಾನರ ವಶಕ್ಕೂ ಬಹಮನಿ ರಾಜ್ಯ ಒಡೆದ ಮೇಲೆ ಬಿದರೆ ಬರೀದ್‍ಶಾಹಿ ಮನೆತನಕ್ಕೂ ಅನಂತರ ಬಿಜಾಪುರದ ಆದಿಲ್‍ಶಾಹಿ ಮನೆತನಕ್ಕೂ ಸೇರಿತು. ಔರಂಗ್‍ಜೇಬನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯಕ್ಕೆ ಒಳಪಟ್ಟು ನಿಜಾಂ-ಉಲ್-ಮುಲ್ಕ್ ಸ್ವತಂತ್ರನಾದ ಮೇಲೆ ಅಸಫ್‍ಜಾಹಿ ಮನೆತನಕ್ಕೆ ಸೇರಿದ ಈ ಪಟ್ಟಣವನ್ನು ಮೀರ್ ಮಹಮದ್ ಇಬ್ರಾಹಿಂ ಖಾನನಿಗೆ ಜಹಗೀರಾಗಿ ಕೊಡಲಾಗಿತ್ತು.

	ಚಾಳುಕ್ಯರ ಕಾಲದಲ್ಲಿ ಕಲ್ಯಾಣದಲ್ಲಿ ಅನೇಕ ದೇವಾಲಯಗಳು ಬಸದಿಗಳು, ಮಠ, ಕೆರೆಗಳು ನಿರ್ಮಿತವಾಗಿದ್ದುವೆಂದು ಅಲ್ಲಿರುವ ಶಾಸನಗಳಿಂದ ತಿಳಿದುಬರುತ್ತದೆ. ಭಾವನ ಗಂಧವಾರಣನೆಂಬ ಸಾಮಂತನೊಬ್ಬ ಕಟ್ಟಿಸಿದ್ದ ತುಂಬೇಶ್ವರ ದೇವಸ್ಥಾನ. ಜೈನಗೋಷ್ಠಿಗಾಗಿ ದಾನ ಚಿಂತಾಮಣಿ ಅತ್ತಿಮಬ್ಬೆ ಕಟ್ಟಿಸಿದ್ದ ಚಂದ್ರಪ್ರಭ ಜಿನಾಲಯ, ಅರಮನೆಯ ದಕ್ಷಿಣ ಭಾಗದಲ್ಲಿ ಭೀಮರಸ ಕಟ್ಟಿಸಿದ ಭೀಮೇಶ್ವರ ದೇವಾಲಯ, ಕಲ್ಯಾಣದ ಪೂರ್ವ ದಿಕ್ಕಿನಲ್ಲಿದ್ದ ಕೇಶವ ದೇವಾಲಯ, ತ್ರಿಭುವನಮಲ್ಲ ಮಾಣಿಕನ ದೇಗುಲ, ಇವಲ್ಲದೇ ಗುಜ್ಜರ ಮಲಯವತೀ ದೇವಿತರ ದೇಗುಲ, ನಾರಾಯಣ ದೇವರು, ಸ್ವಯಂಭೂ ಹಾಟಕೇಶ್ವರ, ನೀಲಕಂಠ ದೇವರು, ಮಧುಕೇಶ್ವರ, ತ್ರಿಪುರಾಂತಕ ಇತ್ಯಾದಿ ಉಲ್ಲೇಖಗಳಿವೆ. ಆದರೆ ನಾರಾಯಣ ಪುರದಲ್ಲಿ ಜೀರ್ಣಾವಸ್ಥೆಯಲ್ಲಿರುವ ದೇವಾಲಯವೊಂದನ್ನು ಬಿಟ್ಟರೆ ಈಗ ಈ ಎಲ್ಲ ದೇವಾಲಯಗಳೂ ನಾಶವಾಗಿವೆ; ಶಿವಪುರದಲ್ಲಿರುವ ದೇವಾಲಯ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಂಡು ಅರೆಬೆರೆಯಾಗಿ ನಿಂತಿದೆ. ಆದರೆ ಊರಿನ ಎಲ್ಲ ಕಡೆಯೂ ಸೂರೆ ಹೋಗಿರುವ, ಹೆಜ್ಜೆ ಹೆಜ್ಜೆಗೂ ಸಿಗುವ ಶಿಲ್ಪದ ತುಣುಕುಗಳು, ಕಂಬಗಳು, ಬಾಗಿಲುವಾಡಗಳು, ಈಚಿನ ಬಾಲಾಜಿ ಮಂದಿರದಲ್ಲಿ ಸ್ಥಾಪಿಸಿರುವ ಜನಾರ್ಧನ, ಅನಂತಶಯನ ಮುಂತಾದ ಮೂರ್ತಿಗಳು, ಸದಾನಂದ ಮಠದ ಮುಂದಿನ ಕೊಳದ ಕಟ್ಟಡಕ್ಕೆ ಸೇರಿಸಿರುವ ಉಮಾಮಹೇಶ್ವರ, ಭೂವರಾಹ, ತಾಂಡವೇಶ್ವರ ಗಜಾರಿ ಮೊದಲಾದುವು., ಪೀರ್‍ಪಾಷಾ ದರ್ಗ ಮತ್ತು ಸಂಗಸೀಯ ಮಸೀದಿಗಳಲ್ಲಿರುವ ಅನೇಕ ರೀತಿಯ ಕಂಬಗಳು, ಮುಸ್ಲಿಮರ ಆಳ್ವಿಕೆಯಲ್ಲಿ ಕೋಟೆಯ ಗೋಡೆಗೆ ಹೇರಳವಾಗಿ ಉಪಯೋಗಿಸಿರುವ ದೇವಾಲಯದ ಗೋಡೆಗಳ ಕಲ್ಲುಗಳು, ವಸ್ತು ಸಂಗ್ರಹಾಲಯಕ್ಕಾಗಿ ಸಂಗ್ರಹಿಸಿ ಈ ಕೋಟೆಯಲ್ಲಿ ಇಟ್ಟಿರುವ ಅನೇಕ ಶಾಸನಗಳು, ಮೂರ್ತಿಗಳು-ಇವೆಲ್ಲ ಚಾಳುಕ್ಯ ಶಿಲ್ಪಕ್ಕೆ ಮಾದರಿಗಳಾಗಿ, ಅಂದಿನ ವೈಭವದ ಸ್ವರೂಪವನ್ನು ನೆನೆಪಿಗೆ ತರುತ್ತದೆ. ತ್ರಿಪುರಾಂತಕನ ಕೆರೆ ಚಾಳುಕ್ಯರ ಕಾಲದಿಂದಲೂ ಉಳಿದುಬಂದಿರುವ ಒಂದು ಸುಂದರ ತಟಾಕ.

	ಬಸವೇಶ್ವರ ಧ್ಯಾನ ಮಾಡುತ್ತಿದ್ದ ಗವಿ, ಅಕ್ಕನಾಗಮ್ಮನ ಗವಿ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ, ಅಲ್ಲಮಪ್ರಭು, ರುದ್ರಮುನಿ, ಅಂಬಿಗರ ಚೌಡಯ್ಯ, ಉರಿಲಿಂಗಿ ಪೆದ್ದಿ ಮೊದಲಾದ ಶರಣರ ಸ್ಮಾರಕಮಂದಿರ, ಗುಹಾದಿ ಸ್ಥಳಗಳು, ಪ್ರಭುದೇವರ ಗದ್ದಿಗೆ, ಪರುಷಗಟ್ಟಿ, ಅನುಭವ ಮಂಟಪದ ನೆಲಗಟ್ಟು ಮೊದಲಾದುವು ಅಲ್ಲಿ ನಡೆದ ಧಾರ್ಮಿಕ ಕ್ರಾಂತಿಗೆ ಸಾಕ್ಷಿಗಳಾಗಿವೆ. ಇತ್ತೀಚೆಗೆ ತ್ರಿಪುರಾಂತಕನ ಕೆರೆಯ ಬಳಿ ದೊರೆತ, 12ನೆಯ ಶತಮಾನಕ್ಕೆ ಸೇರಿದ ಒಂದು ಶಾಸನದಲ್ಲಿ ಮಡಿವಾಳ ಮಾಚಯ್ಯನ ಹೆಸರಿರುವುದು ಗಮನಾರ್ಹ.

	ಮುಸ್ಲಿಮರ ಆಳ್ವಿಕೆಯಲ್ಲಿ ಕಟ್ಟಿದ ಕೋಟೆಯ ಹಲವು ಸುತ್ತಿನ ಗೋಡೆಗಳು, ಬುರುಜುಗಳು, ಅವುಗಳ ಮೇಲೆ ಅಲ್ಲಲ್ಲೇ ಸ್ಥಾಪಿಸಿರುವ ತೋಪುಗಳು ಆಚ್ಚಳಿಯದೆ ಉಳಿದುಬಂದಿವೆ.				    
 (ಎಮ್.ಎಚ್.; ಪಿ.ಬಿ.ಡಿ.; ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ